Saturday 1 March 2014

ನಮ್ಮ ಸಿದ್ದು-ಗೆ ಹೆಣ್ಣು ನೋಡಬೇಕು

ಸುಮಾರು ಎರಡು ಏಡುಗಳ ಹಿಂದೆ, ನಮಗೆ ಮದುವೆ ಮಾಡಲು ನಮ್ಮ ನಮ್ಮ ಮನೆಯವರು ಹುಡುಗಿ ನೋಡುವ ಕೆಲಸ ಮೊದಲು ಮಾಡಿದರು. ಹಳ್ಳಕ್ಕೆ ಬೀಳಲು ಸಜ್ಜಾದ ಮೊದಲ ಕುರಿ - ಸಿದ್ದು. ಬೆಂಗಳೂರು ಮತ್ತು ಬಿಜಾಪುರ ಬಾಗಗಳಲ್ಲಿ ಅವನ ಹೆತ್ತವರು ಹುಡುಗಿಗಾಗಿ ಹುಡುಕಾಟ ನಡೆಸುತ್ತಿದ್ದರು. ಹೀಗೇ ಒಂದು ದಿನ ಬೆಂಗಳೂರಿನಲ್ಲಿರುವ ಹುಡುಗಿಯೊಬ್ಬಳ ಪ್ರಸ್ತಾಪ ಅವರಿಗೆ ಬಂತು. ಸಿದ್ದುನ ಅಪ್ಪ-ಅಮ್ಮ ಇದ್ದದ್ದು ಬಿಜಾಪುರಿನಲ್ಲಿ. ಅಶ್ಟು ದೂರದಿಂದ ಬಂದು ಹೋಗಬೇಕಾದ ಕಾರಣ, ನೀನೇ ಹುಡುಗಿಯ ಕೂಡ ಮಾತಾಡಿ ಬಾ ಎಂದು ಅವರು ಸಿದ್ದುಗೆ ಹೇಳಿದರು. ಹುಡುಗಿ ಬೆಂಗಳೂರಿನಲ್ಲಿ ಅವಳ ತಂದೆ ತಾಯಿಯ ಜೊತೆಗೆ ಇರುವುದಂತೆ. ಅವಳ ಅಪ್ಪ ಮನೆಗೇ ಬಂದು ನೋಡಿಕೊಂಡು ಹೋಗಿ ಅಂದರಂತೆ. ಹುಡುಗಿ ನೋಡಲು ಹೋಗುವುದೆಂದರೆ ಸುಳುವಿನ ಮಾತೆ? ಅದೂ ನಾಚಿಕೆ ಗುಣದ ಸಿದ್ದುಗೆ?
ನಮ್ಮ ಗೆಳೆಯರ ಗುಂಪಿನಲ್ಲಿ ಜೊತೆಯಾಗಿ ಒಂದಿಬ್ಬರಿಗೆ ಬಾ ಎಂದು ಕೇಳಿಕೊಂಡ. ನಮಗೆಲ್ಲರಿಗೂ ಇದೆಲ್ಲ ಹೊಸದು. ಹುಡುಗನ ಜೊತೆ ಅವನ ಗೆಳೆಯರು ಹೋಗುವುದೆಂದರೆ? ಎಲ್ಲರಿಗೂ ಇರಿಸು-ಮುರುಸು, ಅಲ್ಲವೆ? ಆದರೂ ಬೇರೆ ದಾರಿಯಿಲ್ಲದೆ ಅವನ ಜೊತೆ ಹೋಗಲು ನಾನು ಮತ್ತು ಶಿವು ಒಪ್ಪಿದೆವು. ಹುಡುಗಿಯ ತಂದೆಯ ಜೊತೆ ಮಾತಾಡಿ ಒಂದು ಬಾನುವಾರ ಬೆಳಗ್ಗೆ ಸಮಯ ಗೊತ್ತು ಮಾಡಿಯಾಯಿತು. ಹುಡುಗಿಯ ಮನೆ ಕುವೆಂಪು ನಗರದಲ್ಲಿ ಅಂತ ಸಿದ್ದು ನಮಗೆ ಹೇಳಿದ. ಸರಿ, ಆ ಬಾನುವಾರ ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ನಾವು ಹೊರಟೆವು. ಕುವೆಂಪು ನಗರ ತಲುಪಿ ಹುಡುಗಿಯ ತಂದೆಗೆ ಕರೆ ಮಾಡಿ, ಸಿದ್ದು ಮಾತಾಡಿದ:

"ನಮಸ್ಕಾರ್ರೀ. ನಾ ಸಿದ್ದು ಮಾತಾಡಾತಿನ್ರಿ."
"ನಮಸ್ಕಾರ. ಹೇಳ್ರಿ."
"ನಾವು ಕುವೆಂಪು ನಗರ bus stand ನಾಗ ಅದಿವ್ರಿ. ಇಲ್ಲಿಂದ ಹೆಂಗ್ ಬರಬೇಕ್ರೀ?"
"ಅಲ್ಲಿ bus-stop ಇಂದ ಮುಂದ ಬಂದ್ರ ಒಂದು ಕಿರಾಣಿ ಅಂಗಡಿ ಅದ ನೋಡ್ರಿ..." ಇನ್ನು ಮಾತು ಮುಗಿಸದ ಅವರನ್ನು ತಡೆದು,
"ಇಲ್ಲಿ Indian Oil ಪೆಟ್ರೊಲ್ ಬಂಕ್ ಅದ ನೋಡ್ರಿ".
"ನಮ್ ಊರಾಗ Indian Oil ಪೆಟ್ರೊಲ್ ಬಂಕೆ ಇಲ್ಲಲ್ರಿ. ನೀವು ಯಾವ್ ಕಡೆಯಿಂದ ಬಂದೀರಿ?"
"ನಾವು ಜಯನಗರ ಕಡೆಯಿಂದ ಬಂದೀವ್ರೀ".
"ಜಯನಗರ?" ಸ್ವಲ್ಪ ಗಲಿಬಿಲಿಗೊಂಡ ಅವರು, "ನಮ್ಮ್ ಮನಿ ಇರೂದು ಬಂಗಾರಪೇಟೆ ಕುವೆಂಪುನಗರನಾಗ ರೀ". ಅಂತ ವಿವರಿಸಿದರು.
"ಒಂದ್ ನಿಮಿಶ ರೀ", ಎಂದು ಸಿದ್ದು ಮಾತನಾಡುವುದು ನಿಲ್ಲಿಸಿ ನಮ್ಮ ಕಡೆ ನೋಡುತ್ತ, "ಬಂಗಾರಪೇಟ ಎಲ್ಲಿ ಬರತ್ತ ಲೇ?"
ಶಿವು, "ಬಂಗಾರಪೇಟ ಯಾಕ?" ಅಂತ ಕೇಳಿದ. ಎನೋ ಯಡವಟ್ಟಾಗಿದೆ ಅಂತ ಅವನಿಗೆ ಗೊತ್ತಾಯಿತು.
"ಇವ್ರೇನೋ ಬಂಗಾರಪೇಟ ಅನ್ನಾsತಾರ". ಸಿದ್ದು ಅಂದ.
"phone ತಾ ಇಲ್ಲೆ" ಅಂತ ಶಿವು ಪೋನು ಇಸಗೊಂಡು ಅವರೊಡನೆ ಮಾತನಾಡಿದ.
ಅವರ ಒಕ್ಕಣೆ ಪೂರ್ತಿ ಕೇಳಿ ತಿಳಿದುಕೊಂಡ. ಆಗ ಗೊತ್ತಾಗಿದ್ದು, ಹುಡುಗಿಯ ಮನೆ ಇರುವುದು ಬೆಂಗಳೂರಿನಿಂದ ಸುಮಾರು ಎಂಬತ್ತು ಕಿಲೋ ಮೀಟರ್ ದೂರದಲ್ಲಿರುವ ಬಂಗಾರಪೇಟೆಯ ಕುವೆಂಪು ನಗರದಲ್ಲಿ ಎಂದು. ಪೋನಿನ ಕರೆ ಮುಗಿಯುತ್ತಿದ್ದಂತೆಯೇ ಶಿವುನ ಸಿಟ್ಟು ಏರಿ, ಸಿದ್ದುಗೆ ಬಯ್ದಿದ್ದೇ ಬಯ್ದಿದ್ದು.
"ಒಂದ ಕೆಲಸಾ ಸರಿ ಮಾಡಾಂಗಿಲ್ಲ ನೋಡಲೇ ನೀ. ಸರಿಯಾಗಿ ಕೇಳ್ಕೊಳಾಕ್ ಬರಾಂಗಿಲ್ಲಾ? ನಮ್ sunday ಹಾಳ್ ಮಾಡಿದಿ. ನಾ ಅರಾಮ್ ಮಕ್ಕೊತಿದ್ದ್ಯಾ".
ನಾನು ಶಿವುನ ಸಮಾದಾನ ಪಡಿಸಿ, ನನಗೆ ಬಂದಿದ್ದ ಸಿಟ್ಟನ್ನೂ ಸಿದ್ದು ಮೇಲೆ ಬಯ್ದು ತೀರಿಸಿಕೊಂಡೆ.

ಸರಿ, ಈಗ ಏನು ಮಾಡುವುದು? ಬಂಗಾರಪೇಟೆಗೆ ಹೋಗಿಬರಲು ಹೆಚ್ಚು ಕಡಿಮೆ ಒಂದು ದಿನ ಬೇಕು. ಅಶ್ಟು ದೂರ ಹೋಗಿಬರಲು ನಾವು ಒಪ್ಪಲಿಲ್ಲ. ಆ ಊರು ಬೆಂಗಳೂರಿನಿಂದ ತುಂಬ ದೂರ ಇದೆಯೆಂದೂ, ಹೋಗಿ ಬರಲು ಸಮಯ ತೆಗೆದುಕೊಳ್ಳುತ್ತದೆಂದೂ, ಅಪ್ಪ-ಅಮ್ಮರಿಗೆ ಕರೆ ಮಾಡಿ ಸಿದ್ದು ತಿಳಿಸಿದ. ಆದರೆ ಅವನ ಅಮ್ಮ, ಹೇಗಿದ್ದರೂ ಬಾನುವಾರ ರಜಾ, ಹೋಗಿ ಬರಲೇಬೇಕೆಂದು ತಾಕೀತು ಮಾಡಿದರು. ನಾವು ಜೊತೆಗೆ ಬರಲು ಒಪ್ಪಲಿಲ್ಲ. ತಾಯಿಯ ಒತ್ತಾಯದಿಂದ ಮುನಿಸಿಕೊಂಡ ಸಿದ್ದು, ತಾನು ಒಬ್ಬನೇ ಹೋಗಿ ಬರುವುದಾಗಿ ಹೇಳಿದ. ಮುನಿಸಿನಿಂದ ಸಣ್ಣಗಾದ ಅವನ ಮುಕ ನೋಡಲಾಗದೆ, ಕರಾರಿನ ಮೇಲೆ ಅವನ ಜೊತೆ ಬರಲು ಒಪ್ಪಿದೆವು. ಅದೇನೆಂದರೆ, ಅಲ್ಲಿಗೆ ಹೋಗಿ ಬರಲು ಒಂದು Tata Sumo ಬಾಡಿಗೆಗೆ ಪಡೆದು, ಗಾಡಿಯ ಕರ್ಚು ಮತ್ತು ಹಾದಿಯ ಕರ್ಚು (ನಮ್ಮೆಲ್ಲರ ಚಹಾ, ಪಾನಿ, ಮುಂತಾಗಿ) ತಾನೇ ಕೊಡಬೇಕು, ಮತ್ತು ನಮ್ಮ ಗುಂಪಿನ ಇತರ ಗೆಳೆಯರನ್ನೂ ನಮ್ಮ ಜೊತೆ ಬರಲು ಒಪ್ಪಿಸಬೇಕು.

ಗಾಡಿ ಬಾಡಿಗೆ ಹೊಂದಿಸುವುದೇನು ಕಶ್ಟವಾಗಿರಲಿಲ್ಲ ಸಿದ್ದುಗೆ. ಆದರೆ, ಮಿಕ್ಕ ಗೆಳೆಯರು ಜೊತೆಗೆ ಬರಲು ಒಪ್ಪಬೇಕಲ್ಲ? ಅವರಿನ್ನೂ ಮಲಗಿದ್ದರೂ ಆಶ್ಚರ್ಯವಿಲ್ಲ. ಅವರನ್ನು ಎಬ್ಬಿಸಿ, ಒಪ್ಪಿಸಿ ಹೇಗೆ ಕರೆದುಕೊಂಡು ಹೋಗುವುದು ಎಂದು ಸಿದ್ದು ಯೋಚಿಸತೊಡಗಿದ. ಅವರನ್ನು ಒಪ್ಪಿಸಲು ನಾವು ಸಹಾಯ ಮಾಡುತ್ತೇವೆಂದು ಹೇಳಿ ಮರಳಿ ಮನೆಗೆ ಬಂದೆವು. ಮಿಕ್ಕವರು ಎದ್ದಿದ್ದರು. ನಡೆದ ಪ್ರಸಂಗವನ್ನು ನಾನು ರಸವತ್ತಾಗಿ ವಿವರಿಸಿದೆ. ಇದೇ ಅವಕಾಶ ಎಂದು, ಅವರೂ ಸಿದ್ದುಗೆ ಬಯ್ದರು. ಹೇಗಿದ್ದರೂ ಬಾನುವಾರ, ಬಂಗಾರಪೇಟೆಗೆ ಹತ್ತಿರವಿರುವ ಕೋಟಿ ಲಿಂಗ ನೋಡಿಕೊಂಡು ಬಂದರಾಯಿತೆಂದು ಎಲ್ಲರೂ ಒಪ್ಪಿದರು.
ಗೋಪಿಗೆ ಮಾತ್ರ ಯಾಕೋ ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಬರಲು ತಯಾರಾದನು.
ಬಾಡಿಗೆಯ ಗಾಡಿಯೂ ಬಂತು. ಬಿಳಿಯ ಬಣ್ಣದ Toyota Qualis.
ಅದನ್ನು ನೋಡಿ ಗೋಪಿ, "ಗಾಡಿ ಬಣ್ಣ ಸರಿಯಿಲ್ಲ. ನಮಗ black color ಬೇಕು. ನಾ ಬರಾಂಗಿಲ್ಲ" ಅನ್ನಬೇಕೆ?

ಅವನ ಮಾತಿಗೆ ನಾವೆಲ್ಲ ಬಿದ್ದು ಬಿದ್ದು ನಗುತ್ತಾ ಗಾಡಿ ಹತ್ತಿದೆವು. ಸಂಜೆಯ ಹೊತ್ತಿಗೆ ಬಂಗಾರಪೇಟೆ ತಲುಪಿ, ಹುಡುಗಿಯನ್ನು ನೋಡಿಕೊಂಡು, ಕೋಟಿ ಲಿಂಗದ ದರ್ಶನವನ್ನೂ ಪಡೆದು ಮರಳಿ ಬಂದೆವು.

Wednesday 1 January 2014

ಚಿಲ್ಲಿ ಇಂಜಿನಿಯರ್ ಆದದ್ದು

ಈ ಸಂಗತಿ ನಡೆದದ್ದು ನಾವು ಆಗ ತಾನೆ ಬಿಜಾಪುರಿನಲ್ಲಿ ಇಂಜಿನಿಯರಿಂಗ್ ಓದಲು ಸೇರಿಕೊಂಡಾಗ. ನಮ್ಮ ಗೆಳೆಯ ಚಿಲ್ಲಿ, ಮ್ಯಾನೆಜ್ಮೆಂಟ್ ಪಾಲಿನಲ್ಲಿ ಜಾಗ ಪಡೆದುಕೊಂದಿದ್ದ. ಮೊದಲನೆ ಸೆಮಿಸ್ಟರ್ ಮೊದಲಾಗಿ ಕೆಲವು ದಿನಗಳು ಕಳೆದಿದ್ದವು. ಒಂದು ದಿನ, ಕಾಲೇಜಿನ ಹುಡುಗರ ವಸತಿ ಮನೆಯಲ್ಲಿ, ಚಿಲ್ಲಿ ನಮಗೆ ತಾನು ಕಾಲೇಜಿಗೆ ಸೇರಿಕೊಂಡ ಬಗೆ ಹೇಳಿದ.
ಚಿಲ್ಲಿ ಹುಟ್ಟಿ ಬೆಳೆದದ್ದು ಇಂಡಿ ತಾಲೂಕಿನ ಒಂದು ಹಳ್ಳಿಯಲ್ಲಿ. ಅವನು ಓದಿದ್ದು ಇಂಡಿಯಲ್ಲಿದ್ದ ಒಂದು ಕಲಿಕೆಮನೆ (ಶಾಲೆ) ಯಲ್ಲಿ. ನಮ್ಮ ಬಳಗದ ಇನ್ನೊಬ್ಬ ಗೆಳೆಯ ಸಿದ್ದು ಕೂಡ ಅದೇ ಕಲಿಕೆಮನೆಯಲ್ಲಿ ಓದಿದ್ದು. ಹಾಗಾಗಿ ಇಬ್ಬರೂ ಕೂಸುತನದ ಗೆಳೆಯರು. ಹತ್ತನೇ ಇಯತ್ತೆ ಮುಗಿಸಿ ಸಿದ್ದು ಬಿಜಾಪುರಿನ ಪಿಡಿಜೆ ಕಲಿಕೆಮನೆಗೆ ಸೇರಿಕೊಂಡರೆ, ಚಿಲ್ಲಿ ಬಿಜಾಪುರಿನ ಸರ್ಕಾರಿ ಪಿಯುಸಿ ಕಲಿಕೆಮನೆಗೆ ಸೇರಿಕೊಂಡ. ಬೇರೆ ಬೇರೆ ಕಡೆ ಓದಲು ಸೇರಿಕೊಂಡ ಮೇಲೆ ಇವರು ಒಬ್ಬರನ್ನೊಬ್ಬರು ಕಾಣಲು ಅವಕಾಶವೇ ಸಿಗಲಿಲ್ಲ. ಪಿಯುಸಿ ಮುಗಿದು ಪರೀಕ್ಶೆಯ ಪರಿಣಾಮ ಬಂದ ಮೇಲೆ ಸಿದ್ದು ಬಿಜಾಪುರಿನ SECAB ಕಾಲೇಜಿನ ಮ್ಯಾನೆಜ್ಮೆಂಟ್ ಪಾಲಿನಲ್ಲಿ ಇಂಜಿನಿಯರಿಂಗ್ ಸೇರಿಕೊಂಡ. ಚಿಲ್ಲಿಗೆ ಇದ್ದದ್ದು ಚಿಕ್ಕ ಕನಸು. ತಾನು ಟಿಸಿಎಚ್ ಕಲಿತು, ಕನ್ನಡ ಕಲಿಕೆಮನೆಯ ಮಾಸ್ತರ್ ಆಗಬೇಕೆಂದು. ಆದರೆ ಅವನ ಹಣೆಬರಹವೇ ಬೇರೆ ಇತ್ತು.

ಚಿಲ್ಲಿ

ಚಿಲ್ಲಿಯ ಬದುಕಿನ ದಿಕ್ಕು ಬದಲಿಸಿದ ಆ ದಿನ ಅವನು ಟಿಸಿಎಚ್ ಕಾಲೇಜಿಗೆ ಸೇರಿಕೊಳ್ಳಲು ಇರುವ ಗಡುವನ್ನು ನೋಡಿಕೊಂಡು ತಿರುಗಿ ಬರುತ್ತಿದ್ದ. ಪಿಡಿಜೆ ಕಾಲೇಜಿನ ಹತ್ತಿರ ಅವನಿಗೆ ಎದುರಾಗಿದ್ದು ಸಿದ್ದು. ಅವರಿಬ್ಬರ ನಡುವೆ ನಡೆದ ಮಾತುಕತೆ ಹೀಗಿದೆ. ಎರಡು ವರ್ಶದಿಂದ ಪರಿಚಯ ಬಿದ್ದುಹೋಗಿದ್ದರಿಂದ ಒಬ್ಬರನ್ನೊಬ್ಬರು ಬಹುವಚನದಲ್ಲೇ ಮಾತನಾಡಿಸಿದರು.
"ಏನ್ರೀ ಸಿದ್ದು, ಹೆಂಗದೀರಿ?"
"ಆರಾಮ್ ರೀ ಚಿಲ್ಲಿ. ನೀವು?"
"ನಾವೂ ಆರಾಮ್. ಏನ್ ಮಾಡಾತೀರಿ ಈಗ?"
"ನಾ SECAB ಕಾಲೇಜನಾಗ ಇಂಜಿನಿಯರಿಂಗ್ ಸೇರಿನಿ. ನೀವು?"
"ನಾ ಟಿಸಿಎಚ್ ಮಾಡಬೇಕಂತ ಮಾಡೀನ್ರಿ. ಈಗ last date ನೋಡಕೊಂಡ ಬಂದೆ."
"ಹೌದ್ರಿ. ಚಲೋ ಆತು. ಮತ್ತ?"
"Fees ಎಶ್ಟರಿ ಇಂಜಿನಿಯರಿಂಗ್ seatಗ?"
"ನಂದು E&C, ಮ್ಯಾನೆಜ್ಮೆಂಟ seat. ಸ್ವಲ್ಪ ಹೆಚ್ಚದsರಿ".
"ಓ ಹೌದ್ರಿ. ಮತ್ತ?"
"ಮತ್ತೇನಿಲ್ರಿ. ಆಯ್ತು ನಡೀಲ್ರಿ."
"ಆಯ್ತರಿ. ಮತ್ತ ಬೆಟ್ಟಿ ಆಗುನು." ಇಬ್ಬರೂ ಬೇರೆಯಾದರು.

ಹಳ್ಳಿಯ ವಾತಾವರಣದಲ್ಲಿ ಬೆಳೆದ ಚಿಲ್ಲಿಯ ಮನಸ್ಸಿನಲ್ಲಿ ಇಂಜಿನಿಯರಿಂಗ್ ಓದುವ ವಿಚಾರ ಯಾವತ್ತಿಗೂ ಸುಳಿದಿರಲಿಲ್ಲ. ಅವನ ಮುಂದಿನ ಓದಿಗೆ ದಾರಿತೋರಿಸುವವರು ಯಾರೂ ಇರಲಿಲ್ಲ. ಟಿಸಿಎಚ್ ಮುಗಿಸಿ ಸರ್ಕಾರಿ ಕಲಿಕೆಮನೆಯಲ್ಲಿ ಮಾಸ್ತರ್ ಆದರೆ ಸಾಕಿತ್ತು. ಆ ದಿನ ಸಂಜೆ ಮನೆಗೆ ಹೋಗಿ, ತನ್ನ ತಂದೆಯ ಮುಂದೆ, ಸಿದ್ದು ಸಿಕ್ಕಿದ್ದು, ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡದ್ದು, ಎಲ್ಲವನ್ನೂ ಹೇಳಿದನು. ಬಹುಶ್ಹ ಚಿಲ್ಲಿಗೆ ಇಂಜಿನಿಯರಿಂಗ್ ಮಾಡುವ ಮನಸ್ಸಿರಬಹುದೆಂದು ತಿಳಿದು, ಮಾರನೇ ದಿನವೇ ಚಿಲ್ಲಿಯ ತಂದೆ ಇಂಜಿನಿಯರಿಂಗಗೆ ಸೇರಿಕೊಳ್ಳಲು ಬೇಕಾಗುವಷ್ಟು ಹಣವನ್ನು ತೆಗೆದುಕೊಂಡು, ಬಿಜಾಪುರಿಗೆ ಬಂದು SECAB ಕಾಲೇಜಿನಲ್ಲಿ ಸೇರಿಸಿಯೇಬಿಟ್ಟರು. ಅಶ್ಟೇನು ಕಲಿತವರಲ್ಲದ ಚಿಲ್ಲಿಯ ತಂದೆ, ಒಂದೆ ದಿನದಲ್ಲಿ ಚಿಲ್ಲಿಯನ್ನು ಇಂಜಿನಿಯರಿಂಗ್ ಸೇರಿಸಲು ನಿರ್ದರಿಸಿದ್ದು ಆಶ್ಚರ್ಯವೇ ಸರಿ.

ಹೀಗೆ ಚಿಲ್ಲಿ SECABನ ಹುಡುಗರ ವಸತಿಮನೆಯಲ್ಲಿ ತನ್ನ ಕತೆ ಹೇಳಿಕೊಂಡ. ಆಗ ಯಾರೋ ಅವನಿಗೆ ಕೇಳಿದರು

"ನಿನ್ CET ranking ಎಶ್ಟ್ ಬಂದಿತ್ತು?"
"CET rankingಗಾ? ಹಂಗಂದ್ರ?" ಸರ್ಕಾರಿ ಕಲಿಕೆಮನೆಯಲ್ಲಿ, ಬಹುತೇಕ ಹಳ್ಳಿ ಹುಡುಗರ ನಡುವೆ ಕಲಿತ ಚಿಲ್ಲಿಗೆ CET ಅಂದರೇನೆಂದು ಕೂಡ ಗೊತ್ತಿರಲಿಲ್ಲ.
ಇನ್ಯಾರೊ ಅಂದರು: "ನೀ exam ಬರ್ದೀ ಇಲ್ಲೊ? ಒಂದು question ಇರ್ತದ, ನಾಕ್ option ಇರ್ತಾವ"
"ಓಹ್... ಅದೂರೀ... ನಾಕ್ ರಾಗ್ ಒಂದು ಟಿಕ್ ಹಾಕುದು. ಹೂಂ ಬರ್ದಿನಿ."
"ಮತ್ತ ranking ನೋಡಿಲ್ಲಾ?"
"ಇಲ್ಲರಿ"


ಚಿಲ್ಲಿಯ ಮಾತಿಗೆ, ಸುತ್ತ ಕುಳಿತವರೆಲ್ಲ ನಕ್ಕು ನಕ್ಕು ಸುಸ್ತಾದರು. ಅಲ್ಲಿದ್ದ ಕೆಲವರು ಅವನ CET ನೊಂದಣಿ ಅಂಕಿಯನ್ನು ಹುಡುಕಿ, ranking ನೋಡಿದಾಗ ಗೊತ್ತಾಯಿತು ಅವನಿಗೆ ಕಡಿಮೆ ರುಸುಮಿನಲ್ಲಿ (ಫೀಜು) ಸೇರಬಹುದಾಗಿತ್ತು ಎಂದು. ತಡಮಾಡದೆ, ಇನ್ನೂ ನಡೆಯುತ್ತಿದ್ದ CET ಕೌನ್ಸೆಲ್ಲಿಂಗ್ ಹೋಗಿ ಸರ್ಕಾರಿ ಸೀಟು ತೆಗೆದುಕೊಂಡು ಬಂದ. ಕಡಿಮೆ ಕರ್ಚಿನಲ್ಲಿ ಇಂಜಿನಿಯರಿಂಗ್ ಮುಗಿಸಿದ. ಮಾಸ್ತರ್ ಆಗಬೇಕಿದ್ದವನು ಇಂಜಿನಿಯರ್ ಆಗಿ ಜರ್ಮನಿಯಂತ ನಾಡು ಸುತ್ತಿ ಬಂದಿರುವ ಚಿಲ್ಲಿಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ.

Thursday 24 October 2013

ಸೋವಿ ಮೊಬಾಯಿಲು

ನಾವು ಬೆಂಗಳೂರಿಗೆ ಬಂದು ಒಂದು ಏಡು ದಾಟಿತ್ತು. ಶಿವು ಆಗ ಜಯನಗರದ ಚಿಕ್ಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಆಗ ಬರುತ್ತಿದ್ದ ಸಂಬಳವೂ ಕಮ್ಮಿ. ತನ್ನ ತಿಂಗಳ ವೆಚ್ಚಕ್ಕಾಗುವಶ್ಟು ಮಾತ್ರ ಸಾಕಾಗುತ್ತಿತ್ತು. ಮದ್ಯಾನದ ಊಟ ಮುಗಿಸಿ, ಜಯನಗರದ ನಾಲ್ಕನೇ ಹಂತದ ಬೀದಿಗಳಲ್ಲಿ ಸ್ವಲ್ಪ ತಿರುಗಿ ಆಮೇಲೆ ಕೆಲಸಕ್ಕೆ ವಾಪಸಾಗುವುದು ಅವನ ಅಬ್ಯಾಸ. ಆ ದಿನವೂ ಊಟ ಮುಗಿಸಿ ಹಾಗೆಯೇ Cool jointನ ಪಕ್ಕದ ಬೀದಿಯಲ್ಲಿ ಹೋಗುತ್ತಿರುವಾಗ ಎದುರಿಗೆ ಒಬ್ಬ ವ್ಯಕ್ತಿ ಬರುವುದನ್ನು ನೋಡಿದ. ಬಡಗಣ ಬಾರತದವನಂತೆ ಕಾಣುತ್ತಿದ್ದ ಅವನು ಎತ್ತರವಾಗಿ, ಕಟ್ಟುಮಸ್ತಾಗಿ ಕಾಣುತ್ತಿದ್ದನು. ದುಬಾರಿ ಬೆಲೆಯ ಬಟ್ಟೆ, ಬೂಟುಗಳನ್ನು ತೊಟ್ಟಿದಂತೆ ಕಾಣಿಸುತಿತ್ತು. ಅವನನ್ನು ತಲೆಯಿಂದ ಕಾಲಿನವರೆಗೆ ನೋಡಿದ ಶಿವು ಮನಸಿನಲ್ಲೆ, ಈ northi ಸುಳೆಮಕ್ಳು ಬಾರಿ ಇರ್ತಾರ ಅಂದುಕೊಂಡ.
ನೋಡ ನೋಡುತ್ತಿದ್ದಂತೆ ಅವನು ತನ್ನ ಕಡೆಯೇ ಬರುವುದನ್ನು ಶಿವು ಗಮನಿಸಿ ಅಲ್ಲಿಯೇ ನಿಂತುಕೊಂಡ. ಅವರಿಬ್ಬರ ನಡುವಿನ ಹಿಂದಿ ಮಾತುಕತೆಯನ್ನು ಕೆಳಗಡೆ ಕನ್ನಡಕ್ಕಿಳಿಸಲಾಗಿದೆ.
ಬಡಗಣದವನು ತನ್ನ ಪರಿಚಯ ಹೇಳುತ್ತಾ:

"ಬಾಯ್, ನನ್ನ ಹೆಸರು ಸಮೀರ್ ಅಂತ. ನಿಮ್ಮ ಹೆಸರು?"
ಆಗಂತುಕನೊಬ್ಬ ಹೀಗೆ ಇದ್ದಕ್ಕಿದಂತೆಯೇ ಮಾತನಾಡಿಸಿದಾಗ ಸ್ವಲ್ಪ ಗಲಿಬಿಲಿಗೊಂಡರೂ ತೋರಿಸಿಕೊಳ್ಳದೆ,

"ಶಿವ್ರಾಜ್" ಅಂದ.

"ಶಿವ್ರಾಜಜೀ, ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು" ಎನ್ನುತ್ತ ಕಯ್ ಕುಲುಕಲು ತನ್ನ ಬಲಗಯ್ ಮುಂದುಮಾಡಿದ.

"ಏನು?" ಎಂದು ಶಿವು ಅವನ ಕಯ್ಯಲ್ಲಿ ತನ್ನ ಕಯ್ ಇಟ್ಟು, ಸ್ವಲ್ಪ ಕುಲುಕಿ ಕೇಳಿದ.

"ಹೇಳ್ತೀನಿ, ಆದರೆ ನೀವು ಕಂಡಿತ ಸಹಾಯ ಮಾಡೆಬೇಕು"

"ಹೇಳಿ, ಆಮೇಲೆ ನೋಡೊಣ"

"ಆಗಲೇ ಹೇಳಿದ ಹಾಗೆ ನನ್ನ ಹೆಸರು ಸಮೀರ್. ನಾನು ಕಾಶ್ಮೀರದವನು. ಅಲ್ಲಿಂದ ನನ್ನ ಹುಡುಗಿಯನ್ನು ಹಾರಿಸಿಕೊಂಡು ಇಲ್ಲಿ ಬಂದಿದೀನಿ."

"ಒಹ್! ನಿಮಗೆ ತುಂಬಾ ಡೇರಿಂಗ್ ಇದೆ ಬಾಸ್" ಶಿವು ನಗುತ್ತ ಹೇಳಿದ.

"ಆಗ ಏನೋ ಡೇರಿಂಗ್ ಇತ್ತು, ಈಗ ಪ್ರಾಬ್ಲಮ್ ಆಗಿದೆ".

"ಏನು?"

"ನನ್ನ ಮನೆಯವರು ನನ್ನ ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ಬರೋವಾಗ ತಂದಿದ್ದ ದುಡ್ಡೆಲ್ಲಾ ಕಾಲಿ."

"ನನಗೆ ದುಡ್ದೆಲ್ಲಾ ಕೊಡೋಕಾಗಲ್ಲ ಬಾಸ್. ನನ್ ಹತ್ರಾನೇ ಇಲ್ಲ" ಎಂದು ಶಿವು ಮುನ್ನಡೆದ.

"ಅರೇ,.. ಇರಿ ಬಾಸ್. ನಾ ಎನ್ ನಿಮ್ಮ್ ಹತ್ರ ಸುಮ್ನೆ ದುಡ್ಡು ಕೇಳ್ತಾ ಇಲ್ಲ." ಎಂದು ಶಿವುನ ಕಯ್ ಹಿಡಿದು ತಡೆದನು.

"ಮತ್ತೆ?"

"ಇಲ್ಲಿ ನೋಡಿ, ಬ್ಯಾಂಗಲೂರಿಗೆ ಬಂದಾಗ ಹೊಸ ಮೊಬಾಯಿಲ್ ತೊಗೊಂಡಿದ್ದೆ" ಎಂದು ತನ್ನ ಕಯ್ ಯಲ್ಲಿದ್ದ ಬಾಕ್ಸನ್ನು ತೋರಿಸಿದ.

ಅದು NOKIA ‍XPRESS MUSIC ಮೊಬಾಯಿಲಿನ ಡಬ್ಬಿಯಾಗಿತ್ತು. ಶಿವು ಅದನ್ನು ತನ್ನ ಕಯ್ಗೆ ತೆಗೆದುಕೊಂಡು ನೋಡಿದನು. ಅದು ಹೊಸದೇ. ಡಬ್ಬಿ ತೆಗೆದು ಮೊಬಾಯಿಲು ನೋಡಿದ. BRAND NEW ಅಂದುಕೊಂಡ ಮನಸಿನಲ್ಲೇ. ಆಗಿನ ದಿನಗಳಲ್ಲಿ ಅದಕ್ಕಿದ್ದ ಬೆಲೆ ಹದಿನಾಲ್ಕು ಸಾವಿರ ರೂಪಾಯಿ.


"ಇದನ್ನ ನೀವು ತೊಗೊಳೂದಿದ್ರೆ ಹೇಳಿ. ಕಡಿಮೆ ಬೆಲೆಗೆ ಕೊಡ್ತೀನಿ. ನನಗೆ ದುಡ್ಡಿನ ಅವಶ್ಯಕತೆ ಇದೆ" ಆಗಂತುಕ ಹೇಳಿದ.

ಓಳ್ಳೆ ಚಾನ್ಸು ಅಂತ ಶಿವು ಅಂದುಕೊಂಡ. ಅವನಿಗೆ ಅದರ ಮಾರುಕಟ್ಟೆ ಬೆಲೆ ಗೊತ್ತಿತ್ತು. "ಎಶ್ಟಕ್ಕೆ ಕೊಡ್ತೀರ ಬಾಸ್?" ಅಂದ.

"ಅದರ ಬೆಲೆ ಹದಿನಾಲ್ಕು ಸಾವಿರ. ನನಗೆ ತುರ್ತು ದುಡ್ಡು ಬೇಕು. ಹತ್ತು ಸಾವಿರ ಕೊಡಿ."

"ಅಯ್ದು ಸಾವಿರಕ್ಕೆ ಕೊಡ್ತೀರಾ?"

"ಬಾಸ್! ಅದು Nokia Xpress music. Dual sim ಬೇರೆ. ಆಗಲ್ಲಾ ಬಿಡಿ"

"ನನಗೆ ಅದಕ್ಕಿಂತ ಜಾಸ್ತಿ ಕೊಡೋಕ್ ಆಗಲ್ಲಾ ಬಾಸ್"

ಸ್ವಲ್ಪ ಚೌಕಾಸಿ ಮಾಡಿದ ಮೇಲೆ ಆಗಂತುಕನು ಕೊನೆಗೂ ಅಯ್ದು ಸಾವಿರಕ್ಕೆ ಒಪ್ಪಿದನು. ಅವನಿಗೆ ಅಗತ್ಯವಾಗಿ ದುಡ್ಡು ಬೇಕಾಗಿತ್ತೆಂದು ಕಾಣುತ್ತದೆ. ಸರಿ, ಈಗ ಶಿವು ಹತ್ರ ಅಯ್ದು ಸಾವಿರವಾದ್ರು ಎಲ್ಲಿಂದ ಬರಬೇಕು? ಅವನ ತಿಂಗಳ ಸಂಬಳ ಇದ್ದಿದ್ದೆ ಅಶ್ಟು.

"ಸ್ವಲ್ಪ ಇರಿ ಬಾಸ್. ನನ್ ಹತ್ರ ದುಡ್ದಿಲ್ಲ. ನನ್ನ ಜೊತೆಯಲ್ಲಿ ಕೆಲಸ ಮಾಡುವವನ ಹತ್ರ ಕೇಳ್ತಿನಿ" ಎಂದು ತನ್ನ ಒಡಗೆಯ್ಯುಗನಿಗೆ ತನ್ನ ಮೊಬಾಯಿಲಿಂದ ಕಾಲ್ ಮಾಡಿ ತಾನಿದ್ದಲ್ಲಿಗೇ ದುಡ್ಡು ತರಲು ಹೇಳಿದ. ಶಿವುನ ಒಡಗೆಯ್ಯುಗ ದುಡ್ಡು ತಂದ ಮೇಲೆ, ಆಗಂತುಕ ಮೊಬಾಯಿಲ್ ಕೊಟ್ಟು ದುಡ್ಡು ತೆಗೆದುಕೊಂಡು, ತ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟು ಹೋದ. ಸೋವಿಯಾಗಿ ಸಿಕ್ಕ ಮೊಬಾಯಿಲಿನಿಂದ ಶಿವು ಸಂತಸಗೊಂಡು ಕೆಲಸಕ್ಕೆ ಹೋದ. ಅಯ್ದು ಸಾವಿರ ಸಾಲ ತೆಗೆದುಕೊಂಡಿರುವ ಯೋಚನೆ ಅವನ ತಲೆಯಲ್ಲಿ ಬರಲೇ ಇಲ್ಲ.

ಸಂಜೆ ಮನೆಗೆ ಬಂದಾಗ ಗೋಪಿಯೂ ಕೆಲಸ ಮುಗಿಸಿ ಬಂದಿದ್ದ.
"NOKIA Xpress music Dualsim phone ಅಯ್ದ್ ಸಾವಿರಕ್ಕ ತಂದೀನಿ ಲೇ" ಎಂದು ಶುರು ಮಾಡಿ ನಡೆದುದ್ದನ್ನೆಲ್ಲಾ ಕುಶಿಯಿಂದ ಗೋಪಿ ಮುಂದೆ ಹೇಳಿದ ಶಿವು. ಅವನ ಮಾತೆಲ್ಲಾ ಕೇಳಿದ ಗೋಪಿ ತಣ್ಣಗೆ ಹೇಳಿದ:
"NOKIA DUAL SIM Phone ಎಲ್ಲರ ಕೇಳಿ ಎನ್?" (ಆಗ NOKIAದ ಯಾವ phoneನಲ್ಲಿಯೂ dual sim ಸೌಲಬ್ಯವಿರಲಿಲ್ಲ.)

"ಹೌದಲ್ಲೇ... ನಂಗ ಲಕ್ಶಕ್ಕ ಬರಲಿಲ್ಲಾ" ಎಂದು ಲಗುಬಗೆಯಂದ ಮೊಬಾಯಿಲನ್ನು ಹೊರತೆಗೆದು, ಅದರ ಹಿಂದಿರುವ ಪಟ್ಟಿಯನ್ನು ತೆಗೆದು ನೋಡಿದನು. ಅದರಲ್ಲಿ ಎರಡನೇ ಸಿಮ್ ಹಾಕಲು ಜಾಗವೇ ಇರಲಿಲ್ಲ!

ಇರಲಿ ಎಂದು ತನ್ನ ಮೊಬಾಯಿಲಿಂದ ಸಿಮ್ ತೆಗೆದು ಹೊಸ ಮೊಬಾಯಿಲಿಗೆ ಹಾಕಿ ಗೋಪಿ ಮೊಬಾಯಿಲಿಗೆ ಕಾಲ್ ಮಾಡಲು ಪ್ರಯತ್ನಿಸಿದನು. ಕಾಲ್ ಹೋದರೆ ತಾನೆ! ಕಯ್ಲಾದ ಪ್ರಯತ್ನವೆಲ್ಲಾ ಮಾಡಿದನು. ಉಹೂಂ... ಏನು ಮಾಡಿದರೂ ಆಗವಲ್ಲದು. ಚಾರ್ಜ್ ಮಾಡಲು ಹೋದರೆ, ಬ್ಯಾಟರಿ ಚಾರ್ಜ್ ಕೂಡ ಆಗಲಿಲ್ಲ. ಮೋಸ ಹೋದೆ ಎಂದು ಗೊತ್ತಾಗಲು ಶಿವುಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಗೋಪಿ ಮಾತ್ರ ಬಿದ್ದು ಬಿದ್ದು ನಗುತ್ತಿದ್ದ.

"ಹಂಗ್ ಹೆಂಗ ನಂಬಿದಿಲೇ ನಿ ಅವ್ನ? ಹೋತ್ ತೊಗೊ ಮಗನ ಅಯ್ದ್ ಸಾವಿರ. ಯಾರ್ ಕಡೆ ಇಸ್ಕೊಂಡಿದ್ದಿ?"

"ನನ್ನ್ ಕೊಲ್ಗ್ಯಾನ್ ಕಡೆ" (ನಾವು colleague ಗೆ ಕೊಲ್ಗ್ಯಾ ಅಂತೀವಿ)


ಸಿಟ್ಟಿನಲ್ಲಿ ಮೊಬಾಯಿಲನ್ನು ಅದರ ಡಬ್ಬಿಯಲ್ಲಿ ಹಾಕಿ ಕೋಣೆಯ ಅಟ್ಟದ ಮೇಲೆ ಎಸೆದುಬಿಟ್ಟ ಶಿವು.
ಆ ರಾತ್ರಿ ನಾವೆಲ್ಲ ಕೂಡಿದ ಮೇಲೆ ಶಿವುನ ಅನುಬವವನ್ನು ಗೋಪಿ ನಮಗೆ ರಸವತ್ತಾಗಿ ವಿವರಿಸಿದ. ನಾವೆಲ್ಲಾ ಜೋರಾಗಿ ನಕ್ಕಿದ್ದೆ ನಕ್ಕಿದ್ದು.
ಮೊನ್ನೆ... ಅಂದರೆ ಇದೆಲ್ಲಾ ನಡೆದು ನಾಲ್ಕು ವರ್ಶವಾದ ಮೇಲೆ ನಾವೆಲ್ಲ ಒಟ್ಟಾಗಿದ್ದಾಗ ಶಿವು ಕೋಣೆಯ ಅಟ್ಟವನ್ನು ಶುಚಿಗೊಳಿಸುತ್ತಿದ್ದ. ಅಲ್ಲಿಯೇ ಇದ್ದ NOKIA Xpress Music - Dual sim ಅವನ ಕಯ್ಗೆ ಸಿಕ್ಕಿತು. ಅದನ್ನು ನೋಡಿ ನಾವೆಲ್ಲ ಮತ್ತೊಮ್ಮೆ ಬಿದ್ದು ಬಿದ್ದು ನಕ್ಕೆವು.

Sunday 20 October 2013

ಪರಿಚಯ:

ನಮಸ್ಕಾರ. ನಮ್ಮ ಬ್ಲಾಗಿಗೆ ನಲ್ಬರವು. ಏಳು ದೇಹ ಒಂದು ಮನೆ (ಆತ್ಮಗಳು ಬೇರೆ ಬೇರೆ) ಯಲ್ಲಿರುವ ಜೀವದ ಗೆಳೆಯರು ನಾವು. ಈ ಬ್ಲಾಗಿನ ತಲೆಬರಹದಲ್ಲಿರುವಂತೆ ರುಶಿಗಳಲ್ಲ.ಅದು ನಮ್ಮ ಗುಂಪಿಗೆ ನಾವೇ ಕಂಡುಕೊಂಡ ಹೆಸರು. ನಾವು ಸಾಮಾನ್ಯರಲ್ಲಿ ಸಾಮಾನ್ಯರು. ನಿಮ್ಮ ನಡುವೆಯೇ ಕಾಣಸಿಗುವ ಹುಡುಗರು. 

ನಾವೆಲ್ಲ ಒಟ್ಟಾಗಿದ್ದು ವಿಜಯಪುರದ (ಬಿಜಾಪುರ) SECABನ ಇಂಜಿನಿಯರಿಂಗ್ ಕಾಲೇಜಿನಲ್ಲಿ.
ಸ್ವಲ್ಪವೂ ಇಶ್ಟವಿಲ್ಲದ ಇಂಜಿನಿಯರಿಂಗನ್ನು ಕಶ್ಟಪಟ್ಟು ಓದುವಾಗ ಬರಿ ಸಾಮಾನ್ಯ ಗೆಳೆಯರಾಗಿದ್ದ ನಾವು, ಜೀವದ ಗೆಳೆಯರಾಗಿದ್ದು ದುಡಿಯಲು ಬೆಂದಕಾಳೂರಿಗೆ ಬಂದಾಗಲೇ... ಒಂದೇ ಸೂರಿನಡಿ ಇರಲು ಶುರುಮಾಡಿದಾಗಲೇ. 
ಸಾದಾರಣವಾಗಿ ಗೆಳೆತನ ಗಟ್ಟಿಯಾಗಿರುವುದು ಇಬ್ಬರ ನಡುವೆ, ಹೆಚ್ಚೆಂದರೆ ಮೂರು ಜನರ ನಡುವೆ. ನಮ್ಮಹಾಗೆ ಏಳು ಜನರ ನಡುವೆ ಇರುವ ಗಟ್ಟಿ ಗೆಳೆತನ ವಿರಳ. ಇದು ನಮಗೆ ಹೆಮ್ಮೆಯ ವಿಶಯ. ನಮ್ಮೆಲ್ಲರ ವಿಚಾರದಾರೆ, ಗುಣಗಳು ಬೇರೆ ಬೇರೆ. ಒಬ್ಬರ ಬೆನ್ನಹಿಂದೊಬ್ಬರು ಬೈದುಕೊಂಡರೂ, ಜಗಳಾಡಿದರೂ, ಒಬ್ಬರನೊಬ್ಬರು ಒಪ್ಪಿಕೊಂಡಿರುವುದರಿಂದ ಹಾಗೂ ನಮ್ಮೆಲ್ಲರ ಹೊಂದಾಣಿಕೆ ಗುಣದಿಂದಲೇ ನಾವೆಲ್ಲಾ ಒಟ್ಟಾಗಿರುವುದು. ನಮ್ಮ ಹೊಂದಾಣಿಕೆ ಯಾವ ದಂಪತಿಗಳಿಗಾದರೂ ಮಾದರಿಯಾಗಬಲ್ಲದು!

ನಾವು ಬೆಂಗಳೂರಿಗೆ ಬಂದು ಈಗಾಗಲೇ ಆರು ಏಡುಗಳು ಸಂದಿವೆ. ಈ ಬ್ಲಾಗಿನ ಮೂಲಕ ಇಶ್ಟು ದಿನಗಳಲ್ಲಿ ನಮಗಾದ ಸ್ವಾರಸ್ಯಕರ, ಹಾಸ್ಯಬರಿತ ಅನುಬವಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಇತರರಿಗೂ ಇದೇ ತೆರನಾದ ಅನುಬವಗಳಾಗಿರಬಹುದು, ಆದರೆ ನಮ್ಮ ಹಾಸ್ಯ ಪ್ರಗ್ನೆಯಿಂದ ಅವು ವಿಶೇಶ ಎನಿಸುತ್ತವೆ.
ಓದಿ, ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ತಿಟ್ಟಗಳೊಂದಿಗೆ ನಮ್ಮ ಹೆಸರುಗಳನ್ನು ಕೆಳಗೆ ಕಾಣಬಹುದು.

ಬಸು
ಶಿವು



ಗೋಪಿ




  
 ಮಂಜು

ಗೌಡಾ



   
ಚಿಲ್ಲಿ
ಸಿದ್ದು