Thursday, 24 October 2013

ಸೋವಿ ಮೊಬಾಯಿಲು

ನಾವು ಬೆಂಗಳೂರಿಗೆ ಬಂದು ಒಂದು ಏಡು ದಾಟಿತ್ತು. ಶಿವು ಆಗ ಜಯನಗರದ ಚಿಕ್ಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಆಗ ಬರುತ್ತಿದ್ದ ಸಂಬಳವೂ ಕಮ್ಮಿ. ತನ್ನ ತಿಂಗಳ ವೆಚ್ಚಕ್ಕಾಗುವಶ್ಟು ಮಾತ್ರ ಸಾಕಾಗುತ್ತಿತ್ತು. ಮದ್ಯಾನದ ಊಟ ಮುಗಿಸಿ, ಜಯನಗರದ ನಾಲ್ಕನೇ ಹಂತದ ಬೀದಿಗಳಲ್ಲಿ ಸ್ವಲ್ಪ ತಿರುಗಿ ಆಮೇಲೆ ಕೆಲಸಕ್ಕೆ ವಾಪಸಾಗುವುದು ಅವನ ಅಬ್ಯಾಸ. ಆ ದಿನವೂ ಊಟ ಮುಗಿಸಿ ಹಾಗೆಯೇ Cool jointನ ಪಕ್ಕದ ಬೀದಿಯಲ್ಲಿ ಹೋಗುತ್ತಿರುವಾಗ ಎದುರಿಗೆ ಒಬ್ಬ ವ್ಯಕ್ತಿ ಬರುವುದನ್ನು ನೋಡಿದ. ಬಡಗಣ ಬಾರತದವನಂತೆ ಕಾಣುತ್ತಿದ್ದ ಅವನು ಎತ್ತರವಾಗಿ, ಕಟ್ಟುಮಸ್ತಾಗಿ ಕಾಣುತ್ತಿದ್ದನು. ದುಬಾರಿ ಬೆಲೆಯ ಬಟ್ಟೆ, ಬೂಟುಗಳನ್ನು ತೊಟ್ಟಿದಂತೆ ಕಾಣಿಸುತಿತ್ತು. ಅವನನ್ನು ತಲೆಯಿಂದ ಕಾಲಿನವರೆಗೆ ನೋಡಿದ ಶಿವು ಮನಸಿನಲ್ಲೆ, ಈ northi ಸುಳೆಮಕ್ಳು ಬಾರಿ ಇರ್ತಾರ ಅಂದುಕೊಂಡ.
ನೋಡ ನೋಡುತ್ತಿದ್ದಂತೆ ಅವನು ತನ್ನ ಕಡೆಯೇ ಬರುವುದನ್ನು ಶಿವು ಗಮನಿಸಿ ಅಲ್ಲಿಯೇ ನಿಂತುಕೊಂಡ. ಅವರಿಬ್ಬರ ನಡುವಿನ ಹಿಂದಿ ಮಾತುಕತೆಯನ್ನು ಕೆಳಗಡೆ ಕನ್ನಡಕ್ಕಿಳಿಸಲಾಗಿದೆ.
ಬಡಗಣದವನು ತನ್ನ ಪರಿಚಯ ಹೇಳುತ್ತಾ:

"ಬಾಯ್, ನನ್ನ ಹೆಸರು ಸಮೀರ್ ಅಂತ. ನಿಮ್ಮ ಹೆಸರು?"
ಆಗಂತುಕನೊಬ್ಬ ಹೀಗೆ ಇದ್ದಕ್ಕಿದಂತೆಯೇ ಮಾತನಾಡಿಸಿದಾಗ ಸ್ವಲ್ಪ ಗಲಿಬಿಲಿಗೊಂಡರೂ ತೋರಿಸಿಕೊಳ್ಳದೆ,

"ಶಿವ್ರಾಜ್" ಅಂದ.

"ಶಿವ್ರಾಜಜೀ, ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು" ಎನ್ನುತ್ತ ಕಯ್ ಕುಲುಕಲು ತನ್ನ ಬಲಗಯ್ ಮುಂದುಮಾಡಿದ.

"ಏನು?" ಎಂದು ಶಿವು ಅವನ ಕಯ್ಯಲ್ಲಿ ತನ್ನ ಕಯ್ ಇಟ್ಟು, ಸ್ವಲ್ಪ ಕುಲುಕಿ ಕೇಳಿದ.

"ಹೇಳ್ತೀನಿ, ಆದರೆ ನೀವು ಕಂಡಿತ ಸಹಾಯ ಮಾಡೆಬೇಕು"

"ಹೇಳಿ, ಆಮೇಲೆ ನೋಡೊಣ"

"ಆಗಲೇ ಹೇಳಿದ ಹಾಗೆ ನನ್ನ ಹೆಸರು ಸಮೀರ್. ನಾನು ಕಾಶ್ಮೀರದವನು. ಅಲ್ಲಿಂದ ನನ್ನ ಹುಡುಗಿಯನ್ನು ಹಾರಿಸಿಕೊಂಡು ಇಲ್ಲಿ ಬಂದಿದೀನಿ."

"ಒಹ್! ನಿಮಗೆ ತುಂಬಾ ಡೇರಿಂಗ್ ಇದೆ ಬಾಸ್" ಶಿವು ನಗುತ್ತ ಹೇಳಿದ.

"ಆಗ ಏನೋ ಡೇರಿಂಗ್ ಇತ್ತು, ಈಗ ಪ್ರಾಬ್ಲಮ್ ಆಗಿದೆ".

"ಏನು?"

"ನನ್ನ ಮನೆಯವರು ನನ್ನ ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ಬರೋವಾಗ ತಂದಿದ್ದ ದುಡ್ಡೆಲ್ಲಾ ಕಾಲಿ."

"ನನಗೆ ದುಡ್ದೆಲ್ಲಾ ಕೊಡೋಕಾಗಲ್ಲ ಬಾಸ್. ನನ್ ಹತ್ರಾನೇ ಇಲ್ಲ" ಎಂದು ಶಿವು ಮುನ್ನಡೆದ.

"ಅರೇ,.. ಇರಿ ಬಾಸ್. ನಾ ಎನ್ ನಿಮ್ಮ್ ಹತ್ರ ಸುಮ್ನೆ ದುಡ್ಡು ಕೇಳ್ತಾ ಇಲ್ಲ." ಎಂದು ಶಿವುನ ಕಯ್ ಹಿಡಿದು ತಡೆದನು.

"ಮತ್ತೆ?"

"ಇಲ್ಲಿ ನೋಡಿ, ಬ್ಯಾಂಗಲೂರಿಗೆ ಬಂದಾಗ ಹೊಸ ಮೊಬಾಯಿಲ್ ತೊಗೊಂಡಿದ್ದೆ" ಎಂದು ತನ್ನ ಕಯ್ ಯಲ್ಲಿದ್ದ ಬಾಕ್ಸನ್ನು ತೋರಿಸಿದ.

ಅದು NOKIA ‍XPRESS MUSIC ಮೊಬಾಯಿಲಿನ ಡಬ್ಬಿಯಾಗಿತ್ತು. ಶಿವು ಅದನ್ನು ತನ್ನ ಕಯ್ಗೆ ತೆಗೆದುಕೊಂಡು ನೋಡಿದನು. ಅದು ಹೊಸದೇ. ಡಬ್ಬಿ ತೆಗೆದು ಮೊಬಾಯಿಲು ನೋಡಿದ. BRAND NEW ಅಂದುಕೊಂಡ ಮನಸಿನಲ್ಲೇ. ಆಗಿನ ದಿನಗಳಲ್ಲಿ ಅದಕ್ಕಿದ್ದ ಬೆಲೆ ಹದಿನಾಲ್ಕು ಸಾವಿರ ರೂಪಾಯಿ.


"ಇದನ್ನ ನೀವು ತೊಗೊಳೂದಿದ್ರೆ ಹೇಳಿ. ಕಡಿಮೆ ಬೆಲೆಗೆ ಕೊಡ್ತೀನಿ. ನನಗೆ ದುಡ್ಡಿನ ಅವಶ್ಯಕತೆ ಇದೆ" ಆಗಂತುಕ ಹೇಳಿದ.

ಓಳ್ಳೆ ಚಾನ್ಸು ಅಂತ ಶಿವು ಅಂದುಕೊಂಡ. ಅವನಿಗೆ ಅದರ ಮಾರುಕಟ್ಟೆ ಬೆಲೆ ಗೊತ್ತಿತ್ತು. "ಎಶ್ಟಕ್ಕೆ ಕೊಡ್ತೀರ ಬಾಸ್?" ಅಂದ.

"ಅದರ ಬೆಲೆ ಹದಿನಾಲ್ಕು ಸಾವಿರ. ನನಗೆ ತುರ್ತು ದುಡ್ಡು ಬೇಕು. ಹತ್ತು ಸಾವಿರ ಕೊಡಿ."

"ಅಯ್ದು ಸಾವಿರಕ್ಕೆ ಕೊಡ್ತೀರಾ?"

"ಬಾಸ್! ಅದು Nokia Xpress music. Dual sim ಬೇರೆ. ಆಗಲ್ಲಾ ಬಿಡಿ"

"ನನಗೆ ಅದಕ್ಕಿಂತ ಜಾಸ್ತಿ ಕೊಡೋಕ್ ಆಗಲ್ಲಾ ಬಾಸ್"

ಸ್ವಲ್ಪ ಚೌಕಾಸಿ ಮಾಡಿದ ಮೇಲೆ ಆಗಂತುಕನು ಕೊನೆಗೂ ಅಯ್ದು ಸಾವಿರಕ್ಕೆ ಒಪ್ಪಿದನು. ಅವನಿಗೆ ಅಗತ್ಯವಾಗಿ ದುಡ್ಡು ಬೇಕಾಗಿತ್ತೆಂದು ಕಾಣುತ್ತದೆ. ಸರಿ, ಈಗ ಶಿವು ಹತ್ರ ಅಯ್ದು ಸಾವಿರವಾದ್ರು ಎಲ್ಲಿಂದ ಬರಬೇಕು? ಅವನ ತಿಂಗಳ ಸಂಬಳ ಇದ್ದಿದ್ದೆ ಅಶ್ಟು.

"ಸ್ವಲ್ಪ ಇರಿ ಬಾಸ್. ನನ್ ಹತ್ರ ದುಡ್ದಿಲ್ಲ. ನನ್ನ ಜೊತೆಯಲ್ಲಿ ಕೆಲಸ ಮಾಡುವವನ ಹತ್ರ ಕೇಳ್ತಿನಿ" ಎಂದು ತನ್ನ ಒಡಗೆಯ್ಯುಗನಿಗೆ ತನ್ನ ಮೊಬಾಯಿಲಿಂದ ಕಾಲ್ ಮಾಡಿ ತಾನಿದ್ದಲ್ಲಿಗೇ ದುಡ್ಡು ತರಲು ಹೇಳಿದ. ಶಿವುನ ಒಡಗೆಯ್ಯುಗ ದುಡ್ಡು ತಂದ ಮೇಲೆ, ಆಗಂತುಕ ಮೊಬಾಯಿಲ್ ಕೊಟ್ಟು ದುಡ್ಡು ತೆಗೆದುಕೊಂಡು, ತ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟು ಹೋದ. ಸೋವಿಯಾಗಿ ಸಿಕ್ಕ ಮೊಬಾಯಿಲಿನಿಂದ ಶಿವು ಸಂತಸಗೊಂಡು ಕೆಲಸಕ್ಕೆ ಹೋದ. ಅಯ್ದು ಸಾವಿರ ಸಾಲ ತೆಗೆದುಕೊಂಡಿರುವ ಯೋಚನೆ ಅವನ ತಲೆಯಲ್ಲಿ ಬರಲೇ ಇಲ್ಲ.

ಸಂಜೆ ಮನೆಗೆ ಬಂದಾಗ ಗೋಪಿಯೂ ಕೆಲಸ ಮುಗಿಸಿ ಬಂದಿದ್ದ.
"NOKIA Xpress music Dualsim phone ಅಯ್ದ್ ಸಾವಿರಕ್ಕ ತಂದೀನಿ ಲೇ" ಎಂದು ಶುರು ಮಾಡಿ ನಡೆದುದ್ದನ್ನೆಲ್ಲಾ ಕುಶಿಯಿಂದ ಗೋಪಿ ಮುಂದೆ ಹೇಳಿದ ಶಿವು. ಅವನ ಮಾತೆಲ್ಲಾ ಕೇಳಿದ ಗೋಪಿ ತಣ್ಣಗೆ ಹೇಳಿದ:
"NOKIA DUAL SIM Phone ಎಲ್ಲರ ಕೇಳಿ ಎನ್?" (ಆಗ NOKIAದ ಯಾವ phoneನಲ್ಲಿಯೂ dual sim ಸೌಲಬ್ಯವಿರಲಿಲ್ಲ.)

"ಹೌದಲ್ಲೇ... ನಂಗ ಲಕ್ಶಕ್ಕ ಬರಲಿಲ್ಲಾ" ಎಂದು ಲಗುಬಗೆಯಂದ ಮೊಬಾಯಿಲನ್ನು ಹೊರತೆಗೆದು, ಅದರ ಹಿಂದಿರುವ ಪಟ್ಟಿಯನ್ನು ತೆಗೆದು ನೋಡಿದನು. ಅದರಲ್ಲಿ ಎರಡನೇ ಸಿಮ್ ಹಾಕಲು ಜಾಗವೇ ಇರಲಿಲ್ಲ!

ಇರಲಿ ಎಂದು ತನ್ನ ಮೊಬಾಯಿಲಿಂದ ಸಿಮ್ ತೆಗೆದು ಹೊಸ ಮೊಬಾಯಿಲಿಗೆ ಹಾಕಿ ಗೋಪಿ ಮೊಬಾಯಿಲಿಗೆ ಕಾಲ್ ಮಾಡಲು ಪ್ರಯತ್ನಿಸಿದನು. ಕಾಲ್ ಹೋದರೆ ತಾನೆ! ಕಯ್ಲಾದ ಪ್ರಯತ್ನವೆಲ್ಲಾ ಮಾಡಿದನು. ಉಹೂಂ... ಏನು ಮಾಡಿದರೂ ಆಗವಲ್ಲದು. ಚಾರ್ಜ್ ಮಾಡಲು ಹೋದರೆ, ಬ್ಯಾಟರಿ ಚಾರ್ಜ್ ಕೂಡ ಆಗಲಿಲ್ಲ. ಮೋಸ ಹೋದೆ ಎಂದು ಗೊತ್ತಾಗಲು ಶಿವುಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಗೋಪಿ ಮಾತ್ರ ಬಿದ್ದು ಬಿದ್ದು ನಗುತ್ತಿದ್ದ.

"ಹಂಗ್ ಹೆಂಗ ನಂಬಿದಿಲೇ ನಿ ಅವ್ನ? ಹೋತ್ ತೊಗೊ ಮಗನ ಅಯ್ದ್ ಸಾವಿರ. ಯಾರ್ ಕಡೆ ಇಸ್ಕೊಂಡಿದ್ದಿ?"

"ನನ್ನ್ ಕೊಲ್ಗ್ಯಾನ್ ಕಡೆ" (ನಾವು colleague ಗೆ ಕೊಲ್ಗ್ಯಾ ಅಂತೀವಿ)


ಸಿಟ್ಟಿನಲ್ಲಿ ಮೊಬಾಯಿಲನ್ನು ಅದರ ಡಬ್ಬಿಯಲ್ಲಿ ಹಾಕಿ ಕೋಣೆಯ ಅಟ್ಟದ ಮೇಲೆ ಎಸೆದುಬಿಟ್ಟ ಶಿವು.
ಆ ರಾತ್ರಿ ನಾವೆಲ್ಲ ಕೂಡಿದ ಮೇಲೆ ಶಿವುನ ಅನುಬವವನ್ನು ಗೋಪಿ ನಮಗೆ ರಸವತ್ತಾಗಿ ವಿವರಿಸಿದ. ನಾವೆಲ್ಲಾ ಜೋರಾಗಿ ನಕ್ಕಿದ್ದೆ ನಕ್ಕಿದ್ದು.
ಮೊನ್ನೆ... ಅಂದರೆ ಇದೆಲ್ಲಾ ನಡೆದು ನಾಲ್ಕು ವರ್ಶವಾದ ಮೇಲೆ ನಾವೆಲ್ಲ ಒಟ್ಟಾಗಿದ್ದಾಗ ಶಿವು ಕೋಣೆಯ ಅಟ್ಟವನ್ನು ಶುಚಿಗೊಳಿಸುತ್ತಿದ್ದ. ಅಲ್ಲಿಯೇ ಇದ್ದ NOKIA Xpress Music - Dual sim ಅವನ ಕಯ್ಗೆ ಸಿಕ್ಕಿತು. ಅದನ್ನು ನೋಡಿ ನಾವೆಲ್ಲ ಮತ್ತೊಮ್ಮೆ ಬಿದ್ದು ಬಿದ್ದು ನಕ್ಕೆವು.

Sunday, 20 October 2013

ಪರಿಚಯ:

ನಮಸ್ಕಾರ. ನಮ್ಮ ಬ್ಲಾಗಿಗೆ ನಲ್ಬರವು. ಏಳು ದೇಹ ಒಂದು ಮನೆ (ಆತ್ಮಗಳು ಬೇರೆ ಬೇರೆ) ಯಲ್ಲಿರುವ ಜೀವದ ಗೆಳೆಯರು ನಾವು. ಈ ಬ್ಲಾಗಿನ ತಲೆಬರಹದಲ್ಲಿರುವಂತೆ ರುಶಿಗಳಲ್ಲ.ಅದು ನಮ್ಮ ಗುಂಪಿಗೆ ನಾವೇ ಕಂಡುಕೊಂಡ ಹೆಸರು. ನಾವು ಸಾಮಾನ್ಯರಲ್ಲಿ ಸಾಮಾನ್ಯರು. ನಿಮ್ಮ ನಡುವೆಯೇ ಕಾಣಸಿಗುವ ಹುಡುಗರು. 

ನಾವೆಲ್ಲ ಒಟ್ಟಾಗಿದ್ದು ವಿಜಯಪುರದ (ಬಿಜಾಪುರ) SECABನ ಇಂಜಿನಿಯರಿಂಗ್ ಕಾಲೇಜಿನಲ್ಲಿ.
ಸ್ವಲ್ಪವೂ ಇಶ್ಟವಿಲ್ಲದ ಇಂಜಿನಿಯರಿಂಗನ್ನು ಕಶ್ಟಪಟ್ಟು ಓದುವಾಗ ಬರಿ ಸಾಮಾನ್ಯ ಗೆಳೆಯರಾಗಿದ್ದ ನಾವು, ಜೀವದ ಗೆಳೆಯರಾಗಿದ್ದು ದುಡಿಯಲು ಬೆಂದಕಾಳೂರಿಗೆ ಬಂದಾಗಲೇ... ಒಂದೇ ಸೂರಿನಡಿ ಇರಲು ಶುರುಮಾಡಿದಾಗಲೇ. 
ಸಾದಾರಣವಾಗಿ ಗೆಳೆತನ ಗಟ್ಟಿಯಾಗಿರುವುದು ಇಬ್ಬರ ನಡುವೆ, ಹೆಚ್ಚೆಂದರೆ ಮೂರು ಜನರ ನಡುವೆ. ನಮ್ಮಹಾಗೆ ಏಳು ಜನರ ನಡುವೆ ಇರುವ ಗಟ್ಟಿ ಗೆಳೆತನ ವಿರಳ. ಇದು ನಮಗೆ ಹೆಮ್ಮೆಯ ವಿಶಯ. ನಮ್ಮೆಲ್ಲರ ವಿಚಾರದಾರೆ, ಗುಣಗಳು ಬೇರೆ ಬೇರೆ. ಒಬ್ಬರ ಬೆನ್ನಹಿಂದೊಬ್ಬರು ಬೈದುಕೊಂಡರೂ, ಜಗಳಾಡಿದರೂ, ಒಬ್ಬರನೊಬ್ಬರು ಒಪ್ಪಿಕೊಂಡಿರುವುದರಿಂದ ಹಾಗೂ ನಮ್ಮೆಲ್ಲರ ಹೊಂದಾಣಿಕೆ ಗುಣದಿಂದಲೇ ನಾವೆಲ್ಲಾ ಒಟ್ಟಾಗಿರುವುದು. ನಮ್ಮ ಹೊಂದಾಣಿಕೆ ಯಾವ ದಂಪತಿಗಳಿಗಾದರೂ ಮಾದರಿಯಾಗಬಲ್ಲದು!

ನಾವು ಬೆಂಗಳೂರಿಗೆ ಬಂದು ಈಗಾಗಲೇ ಆರು ಏಡುಗಳು ಸಂದಿವೆ. ಈ ಬ್ಲಾಗಿನ ಮೂಲಕ ಇಶ್ಟು ದಿನಗಳಲ್ಲಿ ನಮಗಾದ ಸ್ವಾರಸ್ಯಕರ, ಹಾಸ್ಯಬರಿತ ಅನುಬವಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಇತರರಿಗೂ ಇದೇ ತೆರನಾದ ಅನುಬವಗಳಾಗಿರಬಹುದು, ಆದರೆ ನಮ್ಮ ಹಾಸ್ಯ ಪ್ರಗ್ನೆಯಿಂದ ಅವು ವಿಶೇಶ ಎನಿಸುತ್ತವೆ.
ಓದಿ, ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ತಿಟ್ಟಗಳೊಂದಿಗೆ ನಮ್ಮ ಹೆಸರುಗಳನ್ನು ಕೆಳಗೆ ಕಾಣಬಹುದು.

ಬಸು
ಶಿವು



ಗೋಪಿ




  
 ಮಂಜು

ಗೌಡಾ



   
ಚಿಲ್ಲಿ
ಸಿದ್ದು